ಬೆಂಗಳೂರು, ಜನವರಿ 13: ರಾಜ್ಯ ಸರ್ಕಾರ ಇಬ್ಬರು ದಿಗ್ಗಜರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು, ಕಳೆದ 2008 ನೇ ಸಾಲಿ ಹಿರಿಯ ಸಾಹಿತಿ ನಾಡೋಜ ದೇ.ಜೆ.ಗೌ ಹಾಗೂ 2009 ನೇ ಸಾಲಿಗೆ ಧರ್ಮಸ್ಧಳದ ಧರ್ಮಾಧಿಕಾರಿ ಡಾ:ವಿರೇಂದ್ರ ಹೆಗ್ಗಡೆ ಅವರಿಗೆ ಪ್ರತಿಷ್ಠಿತ ಪುರಸ್ಕಾರ ಸಂದಿದೆ.
ನ್ಯಾಯಮೂರ್ತಿ ಡಾ: ವಿ.ಎಸ್. ಮಳಿಮಠ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ಮಾಡಿದ ಶಿಫಾರಸ್ಸನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಿದೆ.
ಕನ್ನಡ ನಾಡು, ನುಡಿ, ಜಾನಪದ, ಅನುವಾದ ಸಾಹಿತ್ಯ ಹಾಗೂ ಒಟ್ಟಾರೆ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ನಾಡೋಜ ದೇ.ಜೆ.ಗೌ ರನ್ನು ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಮಾಜ ಸೇವೆ, ಗ್ರಾಮೀಣ, ಅಭಿವೃದ್ಧಿ ಕ್ಷೇತ್ರಗಳಲ್ಲಿ ನೀಡಿರುವ ಅನನ್ಯ ಸೇವೆಯನ್ನು ಪರಿಗಣಿಸಿ, ೨೦೦೯ ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಗೆ ಡಾ: ವೀರೇಂದ್ರ ಹೆಗ್ಗಡೆ ಯವರನ್ನು ಆಯ್ಕೆಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು 1992 ನೇ ಸಾಲಿನಿಂದ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ನೀಡುತ್ತಾ ಬಂದಿದೆ.
ನಾಡೋಜ ದೇ.ಜವರೇಗೌಡ:ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ದೇ. ಜವರೇಗೌಡರು ಸಾಹಿತಿ, ಅತ್ಯುತ್ತಮ ಶಿಕ್ಷಣ ತಜ್ಞ ಹಾಗೂ ಕನ್ನಡ ಪರ ಹೋರಾಟಗಾರರೂ ಆಗಿದ್ದಾರೆ. ಅತ್ಯುತ್ತಮ ಗದ್ಯ ಲೇಖಕರಾಗಿರುವ ಇವರು ಟಾಲ್‌ಸ್ಟಾಯ್‌ರಂತಹ ಹಲವು ಜಗದ್ವಿಖ್ಯಾತ ಸಾಹಿತಿಗಳ ಕೃತಿಗಳನ್ನು ತಮ್ಮ ಅನುವಾದಗಳ ಮೂಲಕ ಕನ್ನಡಿಗರಿಗೆ ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಇವರ ಕೊಡುಗೆ ಗಮನಾರ್ಹ. ಮೈಸೂರು ವಿ. ವಿ ಯಲ್ಲಿ ಜಾನಪದ ವಿಭಾಗಕ್ಕೆ ರೂಪು ರೇಷೆ ನೀಡಿದವರೂ ದೇ.ಜೆ.ಗೌ ಆಗಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಇಳಿವಯಸ್ಸಿನಲ್ಲೂ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದವರು. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಸೇರಿದಂತೆ ಹಲವಾರು ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.
ಗ್ರಾಮೀಣ ಹಿನ್ನೆಲೆಯಿಂದ ಬಂದು ವಿಶ್ವವಿದ್ಯಾಲಯದ ಅತ್ಯುನ್ನತ ಸ್ಥಾನ ಅಲಂಕರಿಸಿದ ಅಪರೂಪದ ವ್ಯಕ್ತಿ ದೇ.ಜ.ಗೌ. ಕುವೆಂಪು ಅವರ ಬಗ್ಗೆ ಸಾಕಷ್ಟು ಕೃತಿ ರಚನೆ ಮಾಡಿದ್ದಾರೆ. ದೇಜಗೌ ಕುವೆಂಪು ಅವರ ಅಚ್ಚುಮೆಚ್ಚಿನ ಶಿಷ್ಯರೂ ಹೌದು ಎಂಬುದು ಹೆಗ್ಗಳಿಕೆಯ ವಿಚಾರ.
ಡಾ. ಡಿ. ವೀರೇಂದ್ರ ಹೆಗ್ಗಡೆ: ನಾಡಿನ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಯಾಗಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹರಿಕಾರರಾಗಿ, ಸ್ವಉದ್ಯೋಗ ತರಬೇತಿ ನೀಡುವ ರುಡ್‌ಸೆಟ್‌ನ ರೂವಾರಿಯಾಗಿ, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ಸಮಾಜ ಸೇವೆಯ ಹತ್ತು ಹಲವು ರೂಪಗಳಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮನೆಮಾತಾಗಿದ್ದಾರೆ.
ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆಯವರ ಹಿರಿಯ ಮಗನಾಗಿ ೧೯೪೮ ನವೆಂಬರ್ ೨೫ರಂದು ಜನನ. ೧೯೬೮ರಲ್ಲಿ ಇಪ್ಪತ್ತರ ಎಳೆ ವಯಸ್ಸಿನಲ್ಲಿಯೇ ಧರ್ಮಸ್ಥಳ ಧರ್ಮಾಧಿಕಾರಿಯಾಗುವ ಅನಿವಾರ್ಯತೆ. ತಂದೆ ರತ್ನವರ್ಮ ಹೆಗ್ಗಡೆಯವರ ಗೋಮಟೇಶ್ವರನ ಏಕಶಿಲಾ ವಿಗ್ರಹ ಸ್ಥಾಪನೆಯ ಅಪೂರ್ಣ ಕನಸನ್ನು ನನಸು ಮಾಡಿದ ಹಿರಿಮೆ ಇವರದ್ದು.
ಜನರ ಸಂಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವ. ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ನೆರೆ ಹಾವಳಿಯಿಂದ ತತ್ತರಿಸಿದ ಜನತೆಯ ಪುನರ್ವಸತಿಗೂ ಇವರು ನೆರವು ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಿದ್ದರೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕಸಿರಿಸಿದೆ.